ಪ್ರಿಯ ಅರುಂಧತಿ,

ಅಯೋಧ್ಯಾಕಾಂಡ ನಾಟಕವನ್ನು ಪ್ರದರ್ಶಿಸಲಿಕ್ಕೆಂದು, ನವೋದಯ ನಾಟಕತಂಡವು ಸೆಪ್ಟೆಂಬರ್ 10, 2022 ರಂದು ರಂಗಶಂಕರ ರಂಗಮಂದಿರವನ್ನು ಕಾಯ್ದಿರಿಸಿಕೊಂಡಿರುವುದು ಸರಿಯಷ್ಟೇ, ಆದರೀಗ ರಂಗಶಂಕರದಲ್ಲಿ ನಾಟಕ ಪ್ರದರ್ಶನವನ್ನು ಮಾಡದಿರಲು ನಿರ್ಧರಿಸಿದ್ದೇವೆ, ಪ್ರತಿಭಟನೆಯ ರೂಪದಲ್ಲಿ ಹಾಗೆ ಮಾಡಲು ನಿರ್ಧರಿಸಿದ್ದೇವೆ.

ರಂಗಶಂಕರವು ಬೆಂಗಳೂರು ನಗರದ ಒಂದು ಪ್ರತಿಷ್ಠಿತ ರಂಗಸ್ಥಳ. ಅದನ್ನು ಈ ಮಟ್ಟಕ್ಕೆ ವರಿಸಿದ ನೀವು ಎಲ್ಲ ರಂಗತಂಡಗಳು, ಹಾಗೂ ಪ್ರೇಕ್ಷಕರು ಅಭಿನಂದನಾರ್ಹರು. ರಂಗಶಂಕರವೆಂಬುದು ಒಂದು ಲಾಂಛನ. ಲಾಂಛನದ ಒತ್ತಾಸೆಯು ರಂಗಕರ್ಮಿಗಳಿಗೆ ಸಿಕ್ಕಬೇಕಲ್ಲವೇ? ನಸೀರ್‌ಉದ್ದೀನ್ ಶಹ ಅವರು ಒಬ್ಬ ಒಳ್ಳೆಯ ಕಲಾವಿದರು. ಜೊತೆಗೆ ದೊಡ್ಡ ಸಿನೆಮಾಸ್ಟಾರ್ ಕೂಡ ಹೌದು. ಆತನ ಬಗ್ಗೆ ನನಗೆ ಗೌರವವಿದೆ. ಆದರೆ ಆತ ರಂಗಭೂಮಿಯ ಲಾಂಛನ ಹೇಗಾದಾನು? ಎಲ್ಲ ಸಂಪ್ರದಾಯಗಳನ್ನು ಮುರಿದು, ಇಡೀ ಒಂದು ತಿಂಗಳು ರಂಗಶಂಕರದಲ್ಲಿ ಆತನ ಪ್ರದರ್ಶನಗಳನ್ನು ಏರ್ಪಡಿಸಿದರೆ, ರಂಗಭೂಮಿಗೆ ಈಗ ಬಡಿದಿರುವ ಶಾಪವು ನಿವಾರಣೆಯಾಗಬಲ್ಲುದೆ?

ರಂಗಭೂಮಿಗೆ ಬಡಿದಿರುವ ಶಾಪವಾದರೂ ಯಾವುದು? ಸಿನೆಮಾ ಸೀರೆಯಲ್ ಇತ್ಯಾದಿ ವರ್ಚುಯೆಲ್ ರಂಗಭೂಮಿಯೇ ತಾನೆ? ಇಂದಿನ ಪರಿಸ್ಥಿತಿ ಅದೆಷ್ಟು ಗಂಭೀರವಾಗಿದೆಯೆಂದರೆ, ನಟರನ್ನು ಬಿಡಿ, ಬ್ಯಾಕ್‌ಸ್ಟೇಜ್ ಕಲಾವಿದರೂ ಸಹ ತಮ್ಮ ಜೀವನ ನಿರ್ವಹಣೆಯ ಸಲುವಾಗಿ ಸಿನೆಮಾ ಸೀರೆಯಲ್ಲುಗಳಿಗೆ ತೆರಳಿ ದಿನಗೂಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿಲ್ಲವೇ? ಇಡೀ ರಾಜ್ಯದ ಎಲ್ಲ ಊರುಗಳ ಎಲ್ಲ ರಂಗಚಟುವಟಿಕೆಗಳೂ ನೆಲಕಚ್ಚಿ ಕುಳಿತಿದೆಯಲ್ಲವೇ? ರಂಗಭೂಮಿ, ರಂಗನಟನೆ, ರಂಗನಿರ್ದೇಶನ, ನಾಟಕರಚನೆ ಇತ್ಯಾದಿ ಎಲ್ಲವೂ ಮೂಲೆಗುಂಪಾಗಿರುವ ಇಂದಿನ ಸಂದರ್ಭದಲ್ಲಿ ಒಬ್ಬ ಸಿನೆಮಾ ನಟನ ಪ್ರದರ್ಶಗಳನ್ನು ಎತ್ತಿ ಮೆರೆಸುವುದು ನನಗೆ ಸರಿ ಕಾಣುತ್ತಿಲ್ಲ.

ಎಲ್ಲರಂತೆ ಆತನೂ ಬರಬಹುದಿತ್ತು, ಎಲ್ಲರಂತೆ ಆತನದ್ದೂ ನಾಟಕವನ್ನು ಪ್ರದರ್ಶಿಸಬಹುದಿತ್ತು. ಇರಲಿ, ಸಾಮಾನ್ಯ ರಂಗಕರ್ಮಿಗಳು ರಂಗಶಂಕರಕ್ಕೆ ಕಿವಿಹಿಂಡುವ ಕೆಲಸವನ್ನು ಮಾಡಲಾರರು. ಇರುವ ಒಂದು ರಂಗಮಂದಿರದ ಬಾಗಿಲೂ ಬಂದಾದರೆ ಎಂಬ ಆತಂಕವಿರುತ್ತದೆ ಅವರಿಗೆ. ನಾನು ಮುದುಕ. ಸಾಕಷ್ಟು ನಾಟಕ ಮಾಡಿಸಿ ಆಗಿದೆ. ಒಂದು ಪ್ರದರ್ಶನ ನಿಂತರೆ ನನಗಾಗಲೀ ತಂಡಕ್ಕಾಗಲೀ ಅಂತಹ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ಈ ಪ್ರತಿಭಟನೆ. ರಂಗಶಂಕರದ ಬಗ್ಗೆ ಪ್ರೀತಿ ಉಳಿಸಿಕೊಂಡೇ ಈ ಮಾತುಗಳನ್ನಾಡುತ್ತಿದ್ದೇನೆ.

ಪ್ರಸನ್ನ
ಮೈಸೂರು
ವಿಶ್ವಾಸವಿರಲಿ,
20-07-2022