ರಂಗಾಯಣ ಅನುಭವಿಸುತ್ತಿರುವ ಸಂಕಟಮಯ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿದೇ ಇದೆ. ಏನಿದು ಸಂಕಟ? ವಿವರಿಸುತ್ತೇನೆ. ಹೇಗೆ ನಾವು ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯನ್ನೇ ಒಡೆದು ಪರಂಪರೆ ಎಂದರೆ ಹಿಂದು, ಆಧುನಿಕತೆ ಎಂದರೆ ಹಿಂದು ಮುಂದಿಲ್ಲದ ಅಪಾಯ ಎಂದು ಪ್ರತ್ಯೇಕಿಸಿ ಅನಾಹುತ ಸೃಷ್ಟಿಸುತ್ತಿದ್ದೆವೆಯೋ ಹಾಗೆಯೇ ಅನುಭವಿ ನಟರೆಲ್ಲ ಮುದಿಯರು, ಅನನುಭವಿ ನಟರು ಹದಿಹರೆಯದವರು ಹಾಗೂ ಬಿಸಿ ರಕ್ತದವರು ಎಂದು ತಿಳಿದು, ಹದಿ ಹರೆಯವನ್ನು ಹೊಸದೊಂದು ರಾಜಕೀಯ ಪರ್ವ ನಿರ್ಮಿಸಲಿಕ್ಕೆಂದು ಬಳಸಲಾಗುತ್ತಿದೆ. ಇತ್ತ ಅನುಭವವು ನಿವೃತ್ತಿಯ ದಿನಗಳನ್ನು ಎಣಿಸುತ್ತಾ ಕೂತಿದೆ.
ಆದರೆ, ರಂಗಾಯಣದ ಸಂಕಟವು ಪೂರ್ತಿಯಾಗಿ ಇಂದಿನ ಸರ್ಕಾರದಿಂದಲೇ ಶುರುವಾಯಿತೆಂದರೆ ಅರ್ಧ ಸತ್ಯ ನುಡಿದಂತಾಗುತ್ತದೆ. ಹಿಂದಣ ಸರ್ಕಾರಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಒಡೆದ ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದವು. ರಂಗಾಯಣದ ಇಂದಿನ ನಿರ್ದೇಶಕರ ಅಪರಾಧವೆಂದರೆ, ಆತ ಒಡಕೇ ಒಳಿತು, ಒಗ್ಗಟ್ಟೇ ಕೆಡಕು ಎಂದು ಬಗೆದು ಕಾರ್ಯಪ್ರವೃತ್ತರಾಗಿರುವುದು.
ಇರಲಿ.
ಇಂದಿನ ನಿರ್ದೇಶಕರು ಹಿರಿಯರಿಗೆ ವಿಧಿಸಿರುವ ವನವಾಸ ಶಿಕ್ಷೆಯಿಂದ ಹಳೆಯ ಬೇರುಗಳಿಗೆ ಒಳಿತೇ ಆಗಿದೆ. ಹಿರಿಯರು ವನದ ಬೇರುಗಳಂತೆಯೇ ಹೊಸತನ್ನು ಚಿಗುರಿಸಿದ್ದಾರೆ. ರಂಗಾಯಣದ ವಿನ್ಯಾಸಕ ದ್ವಾರಕಿಯವರ ನಿರ್ದೇಶನದಲ್ಲಿ ಅವರೆಲ್ಲ ಸೇರಿ ಮಿಸ್ಟರ್ ಬೋಗೀಸ್ ಎಂಬ ಹೊಸ ನಾಟಕವನ್ನು ಪ್ರಸ್ತುತ ಪಡಿಸಿದ್ದಾರೆ. ತುಂಬಾ ಲವಲವಿಕೆ ಇರುವ ಪ್ರಸ್ತುತಿ. ಈ ಪ್ರಸ್ತುತಿಯನ್ನು ನೋಡುತ್ತಿರುವಾಗ ಅಭಿನಯದಲ್ಲಿ ಅನುಭವದಿಂದ ಬರುವ ನುರಿತತೆಯೆಂದರೆ ಏನು? ಹಿಂದೆಲ್ಲ ಗುಬ್ಬಿ ವೀರಣ್ಣನವರು, ಪೀರ್ ಸಾಹೇಬರು, ವರದಾಚಾರ್ಯರು ನಾಟಕವಾಡುತ್ತಿದ್ದಾಗ ಜನರೇಕೆ ಇರುವೆಗಳಂತೆ ಮುತ್ತುತ್ತಿದ್ದರು ಎಂಬ ಅರಿವಾಗುತ್ತದೆ. ಮಿಸ್ಟರ್ ಬೋಗೀಸ್ನಲ್ಲಿ ಅದರ ಪರಿಸರಕ್ಕೆ ತಕ್ಕಂತಹ ಸಂಗೀತ, ವಿನ್ಯಾಸ ವಸ್ತ್ರಾಲಂಕಾರ ಪ್ರಸಾಧನ ಬೆಳಕಿನ ವ್ಯವಸ್ಥೆ ಹಾಗೂ ನಟನೆಗಳು ಒಟ್ಟಾಗಿ ಮೇಳೈಸಿಕೊಂಡು ನಿಮ್ಮ ಮುಂದೆ ನಿಲ್ಲುತ್ತವೆ.
ಹೆಚ್ಚೂಕಡಿಮೆ ನಾಲ್ಕು ದಶಕಗಳ ಕಾಲ ನಟನೆ ಮಾತ್ರವನ್ನೇ ಮಾಡಿದ ಕುಶಲಕರ್ಮಿಗಳಿವರು-ತಂತ್ರದಿಂದ ತಂತ್ರಕ್ಕೆ, ಮಂತ್ರದಿಂದ ಮಂತ್ರಕ್ಕೆ, ನಾಟಕದಿಂದ ನಾಟಕಕ್ಕೆ ದಾಟುತ್ತಾ ವಿವಿಧ ಪರಿಸ್ಥಿತಿಗಳನ್ನು ನಿಭಾಯಿಸುತ್ತಾ, ಛಳಿಗಾಲ ಮಳೆಗಾಲಗಳೊಟ್ಟಿಗೆಯೇ ಬೆಳೆದುಬಂದವರಿವರು. ಹಿರಿಯರಾಗಿದ್ದ ಮಾಸ್ತಿಯವರನ್ನು ಕನ್ನಡದ ಆಸ್ತಿಯೆಂದು ಗೌರವಿಸಿದ ಕನ್ನಡಿಗರಿಗೆ ಹಿರಿಯ ಕುಶಲಕರ್ಮಿಗಳಾದ ನಟರನ್ನು ಗೌರವಿಸಲಿಕ್ಕೆ ಮುಜುಗರವುಂಟೇ?
ನಿನ್ನೆ ಟಿಕೆಟ್ ಖರೀದಿಸಿ ನಾಟಕ ನೋಡಲೆಂದು ನಾನು ರಂಗಮಂದಿರ ಪ್ರವೇಶಿಸಿದಾಗ ಅದು ತುಂಬಿ ತುಳುಕುತ್ತಿತ್ತು. ಯಾರೋ ಒಬ್ಬರು ನನ್ನನ್ನು ಕರೆದೊಯ್ದು, ನನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಮೂಲೆಯಲ್ಲಿದ್ದ ಕುರ್ಚಯೊಂದರಲ್ಲಿ ಕೂರಿಸಿದರು. ಕುಳಿತು ನಾಟಕ ನೋಡಿದೆ.
ರಂಗಭೂಮಿಯೇ ಹೀಗೆ! ಯಾರು ಎಷ್ಟು ಭಾಜಭಜಂತ್ರಿ ಬಾರಿಸಿದರೇನು, ಪ್ರೇಕ್ಷಕರು ಸುಳಿಯುವುದಿಲ್ಲ. ಒಳ್ಳೆಯದೊಂದು ಪ್ರಸ್ತುತಿ ನಡೆದರೆ ಸಾಕು ತಮ್ಮೆಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಮರೆತು ಅಡುಗೆಯ ವಾಸನೆ ಹಿಡಿದೇ ಹಸಿದುಬಿಡುವವರಂತೆ, ವಾಸನೆ ಹಿಡಿದು ಜಮಾಯಿಸಿ ಬಿಡುತ್ತಾರೆ ಪ್ರೇಕ್ಷಕರು ರಂಗಮಂದಿರದಲ್ಲಿ. ರಂಗಭೂಮಿಯ ಸ್ವಾಯತ್ತತೆ ಎಂದರೆ ಇಷ್ಟೇ ತಾನೇ? ಅದರ ಪಾಡಿಗೆ ಅದನ್ನು ಬಿಡುವುದು. ಹಕ್ಕಿಯ ಮೇಲೆ ಹಾಡೆಂದು ಬಲವಂತ ಹೇರಲಿಕ್ಕುಂಟೇ?
ಹೇಗೂ ಸರ್ಕಾರಗಳಿಗೆ ಮೂಗು ತೂರಿಸಲಿಕ್ಕೆ ಭಾರೀ ಅಣೆಕಟ್ಟುಗಳಿವೆ, ರಸ್ತೆ ಕಾಮಗಾರಿಯಿದೆ, ಚರಂಡಿ ಮೇಲುಸ್ತುವಾರಿ ಇದೆ. ಗುಬ್ಬಿಯ ಮೇಲೇಕೇ ಬ್ರಹ್ಮಾಸ್ತ್ರ ಹೇಳಿ? ಮುಗಿಸುವ ಮೊದಲು ನಟರಿಗೆ ಮತ್ತು ನಿರ್ದೇಶಕರಿಗೆ ಒಂದು ಮಾತು. ಮಿಸ್ಟರ್ ಬೋಗೀಸ್ ಇನ್ನೂ ಪೂರ್ತಿಯಾಗಿ ಮುದಿತನ ಕಳೆದುಕೊಂಡಿಲ್ಲ. ಪ್ರಸ್ತುತಿಯ ಕಡೆಯ ನಲವತ್ತು ನಿಮಿಷಗಳು ಅನಗತ್ಯವಾಗಿ ಬೆಳೆದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸತೊಡಗುತ್ತದೆ. ತಿದ್ದಿ. ನೀವೂ ಜನಪ್ರಿಯರಾಗಿರಿ, ರಂಗಭೂಮಿಯನ್ನೂ ಜನಪ್ರಿಯವಾಗಿಸಿ.