ಹೆಣ್ಣುಮಗುವಿಗೆ ಶಿಕ್ಷಣದಲ್ಲಿ ಉದ್ಯೋಗದಲ್ಲಿ ಒಟ್ಟಾರೆಯಾಗಿ ಎ ರೀತಿಯ ಸಮಾನ ಅವಕಾಶಗಳಲ್ಲಿ ತಡೆಯೊಡ್ಡುವವರಿಗೆ ಧರ್ಮವಿಲ್ಲ ಮಗು. ಈಗ ಹಿಜಾಬಿನ ನೆಪವೊಡ್ಡಿ ತಡೆಯೊಡ್ಡಿದ್ದಾರೆ ಅಷ್ಟೇ, ಸಿಟ್ಟಾಗದಿರು. ಸೀತೆಯಂತೆ ನೀನೂ ಸಹ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸು. ಹಿಂದೂಮಗುವಿಗೆ ಸರಳವೆಂದು ತಿಳಿದೆಯೇನು ಮುನ್ನಡೆಯುವುದು, ಅಥವಾ ಗಂಡುಮಗುವಿಗೆ, ಅಥವಾ ಮುಸಲ್ಮಾನ ಮಗುವಿಗೆ? ಎಲ್ಲರಿಗೂ ಗರ್ವಗಳು ಎದುರಾಗುತ್ತವೆ. ಸೂಟಿನ ಗರ್ವ, ಬೂಟಿನ ಗರ್ವ, ಆಂಗ್ಲಭಾಷೆ, ಅಧಿಕಾರ, ಅಂತಸ್ತುಗಳ ಗರ್ವ, ಜಾತಿ ಗರ್ವ, ಧರ್ಮ ಗರ್ವ.., ಎಷ್ಟೆಲ್ಲಾ ಗರ್ವಗಳಿವೆ ನೋಡು ಇತರರನ್ನು ತಲೆಹಿಡಿಯಲಿಕ್ಕೆ?

ನಿನಗೆ ಇಷ್ಟೆಲ್ಲ ಬೋಧನೆ ಮಾಡುತ್ತಿರುವ ನಾನು ಹುಟ್ಟಿನಿಂದ ಹಿಂದುವೂ ಹೌದು ಗಂಡೂ ಹೌದು. ಆದರೆ ರಾಮನ ಅನುಯಾಯಿ ನಾನು. ಅವನ ಮಹಾನ್ ಆದರ್ಶದಂತೆ ನನ್ನ ಗಂಡುಸುತನ ಹಾಗೂ ಹಿಂದುತ್ವ ಎರಡನ್ನೂ ಸಭ್ಯತೆಯಿಂದ ನಿಭಾಯಿಸುವ ಪ್ರಯತ್ನ ನಡೆಸಿದ್ದೇನೆ ಅಷ್ಟೇ. ಕೇಸರಿಶಾಲು ಹೊದೆದು ನಿನ್ನನ್ನು ತಡೆಯುತ್ತಿರುವ ಯುವಕರದ್ದು ಬಿಸಿರಕ್ತ ಪಾಪ. ತಿಳಿಯದು ಅವರಿಗೆ, ರಾಮನಿಗೆ ಗರ್ವವಿರಲಿಲ್ಲವೆಂದು. ರಾಮ ಹೇಳಲಿಲ್ಲ ಗರ್ವದಿಂದ ತಡೆಯಿರಿ ಇತರರನ್ನು ಎಂದು. ಸಭ್ಯನಾಗಿರು ಎಂದಷ್ಟೇ ಹೇಳಿದ ರಾಮ ನಮಗೆಲ್ಲ. ಹಿಂದುತ್ವವಿರಲಿ ಮುಸಲ್ಮಾನತತ್ವವಿರಲಿ ಸಮಾಜವಾದವಿರಲಿ, ಎಲ್ಲವೂ ಸಭ್ಯತೆಯ ಪ್ರತಿಪಾದನೆಗಳಲ್ಲವೇ ಮಗು? ಹುಡುಗರೂ ಕೆಟ್ಟವರೇನಲ್ಲ ತಿಳಿದುಕೊಳ್ಳುತ್ತಾರೆ ಬಿಡು. ಗರ್ವ ರಾವಣನ ಗುಣವೇ ಹೊರತು ರಾಮನ ಗುಣವಲ್ಲ. ನೀನೂ ಗರ್ವ ಮಾಡದಿರು. ನಿನ್ನ ಅಣ್ಣ ತಮ್ಮಂದಿರೂ ಗರ್ವ ಮಾಡದಿರಲಿ. ಇದು ಸಭ್ಯದೇಶ ಮಗಳೇ, ಇವೆಲ್ಲ ಕ್ಷಣಿಕ ಕಷ್ಟಗಳಷ್ಟೇ.
ಪ್ರಸನ್ನ